ಮುಳ್ಳಯ್ಯನಗಿರಿ

	ಕರ್ನಾಟಕದ ಅತ್ಯುನ್ನತ ಗಿರಿ ಶಿಖರ.  ಸಮುದ್ರ ಮಟ್ಟದಿಂದ 1,925 ಮೀ.  ಎತ್ತರವಿದೆ.  ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟ ಶ್ರೇಣಿ ಒಳಚಾಚಿರುವ ಬೆಟ್ಟಸಾಲಿನಲ್ಲಿ ಚಿಕ್ಕಮಗಳೂರು ಪಟ್ಟಣದ ಉತ್ತರಕ್ಕಿದೆ.

	ಈ ಗಿರಿಯ ಎತ್ತರ ಪ್ರದೇಶಗಳಿಂದ ಧುಮುಕುವ ಜಲಪಾತಗಳು ಮತ್ತು ದಟ್ಟವಾಗಿ ಹಬ್ಬಿರುವ ಕಾಡು ನೋಡಲು ಅತ್ಯಂತ ರಮಣೀಯ.  ಶಿಖರದಿಂದ ದೂರ ಪ್ರದೇಶಗಳ ವಿಹಂಗಮನೋಟ ಕಂಡುಬರುತ್ತದೆ.  ಸೋಮವಾಹಿನಿ, ಹೊನ್ನಮ್ಮನ ಹಳ್ಳ, ವೇದಾ, ಆವತಿ ಮುಂತಾದ ತೊರೆಗಳು ಈ ಗಿರಿಯಲ್ಲಿ ಹುಟ್ಟುತ್ತವೆ.  ವೇದಾನದಿಗೆ ಶಮನಗಿರಿ ಬಳಿ ಅಣೆಕಟ್ಟು ಹಾಕಿ ಅಯ್ಯನ ಕೆರೆ ನಿರ್ಮಿಸಿದ್ದಾರೆ.  ಪುರಾಣ ಪ್ರಸಿದ್ಧ ರುಕ್ಮಾಂಗದ ಮಹಾರಾಜ ಈ ಕೆರೆ ನಿರ್ಮಿಸಿದನೆಂದು ಪ್ರತೀತಿ.  ವೇದಾ ಮತ್ತು ಆವತಿ ತೊರೆಗಳು ಕಡೂರಿನ ಬಳಿ ತಂಗಲಿ ಎಂಬಲ್ಲಿ ಕೂಡಿ ವೇದಾವತಿ ಎಂಬ ಹೆಸರು ಪಡೆದು ಮುಂದೆ ಪ್ರವಹಿಸುತ್ತದೆ.  ಈ ಪರ್ವತಶ್ರೇಣಿಯಲ್ಲಿ ಹೇರಳವಾಗಿ ಕಬ್ಬಿಣದ ಅದುರು ದೊರೆಯುತ್ತದೆ.  ಇಲ್ಲಿಯ ಕಾಡುಗಳಲ್ಲಿ ಹುಲಿ, ಕಾಡುಕೋಣ, ಚಿರತೆ, ಸಾರಗ, ಮುಳ್ಳುಹಂದಿ ಮುಂತಾದ ಪ್ರಾಣಿಗಳೂ ತೇಗ, ಶ್ರೀಗಂಧ, ನಂದಿ, ಮತ್ತಿ ಮುಂತಾದ ಮರಗಳೂ ಇವೆ.  ಅಮೂಲ್ಯವಾದ ಅನೇಕ ಔಷಧೋಪಯೋಗಿ ಗಿಡಮೂಲಿಕೆಗಳಿಗೆ ಈ ಗಿರಿ ಪ್ರಸಿದ್ಧ.  ಈ ಗಿರಿಸಾಲನ್ನೇ ಪುರಾಣಗಳಲ್ಲಿ ಚಂದ್ರದ್ರೋಣ ಪರ್ವತವೆಂದು ಕರೆಯಲಾಗಿದೆ.  ರಾಮ ರಾವಣರ ಯುದ್ಧಕಾಲದಲ್ಲಿ ಹನುಮಂತ ಈ ಗಿರಿಯಿಂದಲೇ ಸಂಜೀವಿನಿ ಮೂಲಿಕೆಯನ್ನು ತೆಗೆದುಕೊಂಡು ಹೋದನೆಂಬ ಐತಿಹ್ಯವಿದೆ.  ಈ ಗಿರಿಯ ಹೊರ ಮೈಯಲ್ಲಿ ಅತ್ಯುತ್ತಮ ಕಾಫಿ ತೋಟಗಳು ಇವೆ ಜೊತೆಗೆ ಕತ್ತಳೆ, ಏಲಕ್ಕಿ ತೋಟಗಳೂ ಇವೆ.

	ಗಿರಿಯ ಮೇಲ್ಭಾಗದಲ್ಲಿ ಮುಳ್ಳಯ್ಯನ ಗದ್ದುಗೆ, ಮಧ್ಯ ಭಾಗದಲ್ಲಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಹಾಗೂ ಗಿರಿಯ ಪಾದದಲ್ಲಿ ನಿರ್ವಾಣಸ್ವಾಮಿ ಗದ್ದುಗ ಮತ್ತು ಮಠ ಇವೆ.  ದೇವಾಲಯಗಳ ಹಾಗೂ ಗದ್ದುಗೆಗಳ ನಿರ್ವಹಣೆ ಇಲ್ಲಿಯ ಮೂರು ನಾಡಿನವರಿಗೆ ಸೇರಿದೆ.  ಸುತ್ತಲಿನ ಜನರು ತಮ್ಮ ಗ್ರಾಮದೇವತೆಗಳ ಉತ್ಸವ ಮೂರ್ತಿಗಳೊಡನೆ ಕಾಲ್ನಡಿಗೆಯಲ್ಲಿ ಯಾತ್ರಾರ್ಥಿಗಳಾಗಿ ಬಂದು ಇಲ್ಲಿಯ ಜಾತ್ರೆಗಳಲ್ಲಿ ಭಾಗವಹಿಸಿ ಸೇವೆ ಸಲ್ಲಿಸುತ್ತಾರೆ.  ಪ್ರತಿ ಯುಗಾದಿಯಲ್ಲೂ ನಡೆಯುವ ಇಲ್ಲಿಯ ಜಾತ್ರೆಗೆ ಹೆಚ್ಚು ಜನ ಬರುತ್ತಾರೆ.  ಇಲ್ಲಿರುವ ದೇವಾಲಯಗಳಿಗೆ ಹಾಗೂ ಗದ್ದುಗೆಗಳಿಗೆ ಹೋಗಿಬರಲು ರಸ್ತೆಗಳಿವೆ.  ಮುಳ್ಳುಯ್ಯನಗಿರಿ ಒಂದು ಪ್ರೇಕ್ಷಣೀಯ ಸ್ಥಳವೆನಿಸಿದೆ.
(ಎಂ. ಜಿ. ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ